ಮರಿಯಪ್ಪ ಭಟ್ಟ, ಎಂ -
27-7-1906 - 21-3-1980. ಕನ್ನಡ ವಿದ್ವಾಂಸ, ಸಾಹಿತಿ, ಸಂಶೋಧಕರು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ಕಬಕ ಎಂಬಲ್ಲಿ. ತಂದೆ ಮುಂಗ್ಲಿಮನೆ ಗೋವಿಂದಭಟ್ಟ, ತಾಯಿ ಕಾವೇರಿ ಅಮ್ಮ. ಒಂದು ಕಾಲದಲ್ಲಿ ಶ್ರೀಮಂತ ಮನೆತನ ಎನಿಸಿದ ಈ ಕುಟುಂಬ ಇವರು ಹುಟ್ಟುವ ವೇಳೆಗೆ ಬಡತನ ಪರಾಕಾಷ್ಠೆ ಮುಟ್ಟಿತ್ತು. ಇವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಪುತ್ತೂರಿನ ಸಮೀಪದ ಪೋಳ್ಯದ ಬಾಸೆಲ್ ಮಿಷನ್‍ನ ಪ್ರೈಮರಿ ಶಾಲೆಯಲ್ಲಿ ಪಡೆದರು. ಅನಂತರ ಪುತ್ತೂರಿನ ಸೆಕೆಂಡರಿ ಶಾಲೆಗೆ ಸೇರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆದು ತೇರ್ಗಡೆಯಾದರು (1924). ಬಡತನದ ಬವಣೆ ಇದ್ದರೂ ಓದಬೇಕೆಂಬ ಜ್ಞಾನದಾಹದಿಂದ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜ್ ಸೇರಿ ಇಂಟರ್ ಮಿಡಿಯೇಟ್ ಮುಗಿಸಿ ಮುಂದೆ ಗಣಿತ ಮತ್ತು ಅನ್ವಯಿಕ ಭೌತವಿಜ್ಞಾನ ವಿಷಯಗಳನ್ನು ಐಚ್ಛಿಕವಾಗಿ ಪಡೆದು 1928 ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಕಾಲೇಜಿಗೆ ಐದನೆಯ ಸ್ಥಾನಗಳಿಸಿದರು. ಪಂಡಿತಮುಳಿಯ ತಿಮ್ಮಪ್ಪಯ್ಯ ಇವರ ಕನ್ನಡ ಗುರುಗಳು. ಹೀಗಾಗಿ ಇವರಿಗೆ ಕನ್ನಡದ ಮೇಲೆ ಅಪಾರ ಪ್ರೇಮ ಬೆಳೆದಿತ್ತು. ತತ್ಪೂರ್ವ ಪುತ್ತೂರಿನ ಪ್ರೌಢಶಾಲೆಯಲ್ಲಿದ್ದಾಗ ಉಗ್ರಾಣ ಮಂಗೇಶರಾವ್ ಹಾಗೂ ಕಡವ ಶಂಭುಶರ್ಮರಂಥ ಅಧ್ಯಾಪಕರ ಪ್ರಭಾವ ಇವರ ಮೇಲೆ ಆಗಿತ್ತು. ಇವರು ಮದ್ರಾಸಿನಲ್ಲಿದ್ದಾಗ ಬೆನಗಲ್ ರಾಮರಾಯರು, ಉಡುಪಿ ಸೀತಾರಾಮಾಚಾರ್ಯರು, ಸಾಬಾಜಿ ಶ್ರೀನಿವಾಸರಾಯರು, ದೇವಶಿಖಾಮಣಿ ಅಳಸಿಂಗರಾಚಾರ್ಯರು ಮುಂತಾದವರ ಪ್ರೇರಣೆ ಪ್ರೋತ್ಸಾಹಗಳಿಂದ ವಿದ್ವಾನ್ ಪರೀಕ್ಷೆ ಹಾಗೂ ಟ್ರೈನಿಂಗ್ ಕಾಲೇಜಿನ ಎಲ್.ಟಿ. ಪರೀಕ್ಷೆಗಳಲ್ಲಿ ತೇರ್ಗಡೆ ಆದರು. ಅಲ್ಲದೆ 1937ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಕೂಡ ಪಡೆದರು.

	1928ರಲ್ಲಿ ಪದವಿ ಮುಗಿಸಿದ ಇವರು ಉದ್ಯೋಗಾರ್ಥಿಯಾಗಿ ಮದ್ರಾಸಿಗೆ ಬಂದು ಬೆನಗಲ್ ರಾಮಾರಾಯರ ಸಹಾಯದಿಂದ ತಾತ್ಕಾಲಿಕ ಉಪಭಾಷಾಂತರಕಾರ ಹುದ್ದೆ ಪಡೆದರು. ಮುಂದೆ 1929ರಲ್ಲಿ ಮದ್ರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿ ಕೆಲಸ ಮಾಡಿದರು. ಶಾಲೆಯ ಸೂಪರಿಂಟೆಂಡಂಟ್ ಆಗಿದ್ದ ವುಡ್ ಬರ್ನ್‍ರ ಕೃಪೆಯಿಂದ ಆ ಶಾಲೆಯಲ್ಲಿ ಗಣಿತದ ಖಾಯಂ ಅಧ್ಯಾಪಕರಾಗಿ ನೇಮಕಗೊಂಡರು.

	ಮರಿಯಪ್ಪ ಭಟ್ಟರು 1933ರಲ್ಲಿ ತಮ್ಮ 27ನೆಯ ವಯಸ್ಸಿನಲ್ಲಿ ಮದುವೆಯಾಗಿ ಐದು ಹೆಣ್ಣು ಮತ್ತು ಮೂರು ಗಂಡುಮಕ್ಕಳನ್ನು ಪಡೆದರು.

	1940ರಲ್ಲಿ ಭಟ್ಟರು ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ಸೇರಿದರು. 33 ವರ್ಷಗಳಷ್ಟು ದೀರ್ಘಕಾಲ ಆ ವಿಭಾಗದಲ್ಲಿ ರೀಟರ್, ಪ್ರಾಧ್ಯಾಪಕ ಹುದ್ದೆಗಳಂಥ ಜವಾಬ್ದಾರಿ ಸ್ಥಾನಗಳಲ್ಲಿ ಕೆಲಸಮಾಡಿ 1973ರಲ್ಲಿ ನಿವೃತ್ತರಾದರು. 1955ರಲ್ಲಿ ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್‍ನಲ್ಲಿ ಭಾಷಾವಿಜ್ಞಾನದ ವಿಶೇಷ ಅಧ್ಯಯನಕ್ಕಾಗಿ ತೆರಳಿ 1957ರಲ್ಲಿ ವಾಪಸ್ಸಾದರು. ಅಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಜೆ.ಎಫ್. ಫರ್ಢ್ ಎಂಬವರ ಪ್ರಭಾವ ಇವರ ಮೇಲೆ ಅಗಾಧವಾಗಿ ಆಯಿತು.

	ಭಟ್ಟರು ವಿವಿಧ ವಿಶ್ವವಿದ್ಯಾಲಯಗಳ ಹಾಗೂ ಸಂಘಸಂಸ್ಥೆಗಳ ಅನೇಕ ಸಭೆ ಸಮಿತಿಗಳಲ್ಲಿ ಸದಸ್ಯರಾಗಿದ್ದುದರಿಂದ ಅವರ ಗೆಳೆಯರ ಬಳಗ ಅಪಾರವಾಗಿತ್ತು. ಆಗ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಪ್ರಕಟಣೆ ಕಾರ್ಯವೇ ಹೆಚ್ಚಾಗಿದ್ದು ಅಧ್ಯಾಪನ ಅಷ್ಟಾಗಿ ಇರಲಿಲ್ಲ. ಪ್ರೆಸಿಡೆನ್ಸಿ ಕಾಲೇಜಿನ ಸ್ನಾತಕೋತ್ತರ ತರಗತಿಗಳಿಗೆ ಕೆಲವು ಪಾಠಗಳು ಈ ವಿಭಾಗದಲ್ಲೂ ನಡೆಯುತ್ತಿದ್ದುದರಿಂದ ಭಟ್ಟರ ನಿಕಟ ಶಿಷ್ಯತ್ವ ದೊರಕಿದ ಭಾಗ್ಯ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಅವರ ಸಂಪರ್ಕ ವಲಯದೊಳಗೆ ಬಂದ ಯಾರೇ ಆಗಲಿ, ಅವರೊಡನೆ ತಾದಾತ್ಮ್ಯ ಹೊಂದುತ್ತಿದ್ದರು. ಎಣೆಯಿಲ್ಲದ ಪ್ರೀತಿ, ಪ್ರೋತ್ಸಾಹ ಅವರಿಂದ ದೊರಕಿ ಸರ್ವರೀತಿಯಿಂದಲೂ ಅವರಿಂದ ಪ್ರಭಾವಿತರಾಗುತ್ತಿದ್ದರು. `ವಸುದೈವಕುಟುಂಬಕಂ' ಎಂಬ ತತ್ವಕ್ಕೆ ಮರಿಯಪ್ಪ ಭಟ್ಟರು ಸಾಕಾರವಾಗಿದ್ದರು. 

	ಕರ್ನಾಟಕದಿಂದ ದೂರವಾದ ಮದ್ರಾಸಿನಲ್ಲಿ ಕನ್ನಡಕ್ಕೆ ಪ್ರೋತ್ಸಾಹ, ನೆರವು ದುರ್ಲಭವಾಗಿದ್ದರೂ ಭಟ್ಟರು ಹತ್ತು ಹನ್ನೆರಡು ಹಳೆಯ ಹಸ್ತ ಪ್ರತಿಗಳನ್ನು ಸಂಪಾದಿಸಿ, ವಿಸ್ತಾರ ಪರಿಚಯ, ಅಧ್ಯಯನ, ಕವಿ ಕಾವ್ಯ ವಿಮರ್ಶೆಗಳನ್ನು ಬರೆದು ಪ್ರಕಟಿಸಿದ್ದರು. ಕನ್ನಡದ ಪ್ರಾಚೀನ ಕೃತಿಗಳನ್ನು ಶುದ್ಧೀಕರಿಸಿ ಪ್ರಕಟಿಸುವುದು ಅಷ್ಟು ಸುಲಭವಲ್ಲದ ಆ ಕಾಲದಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮರಿಯಪ್ಪ ಭಟ್ಟರ ನೇತೃತ್ವದಲ್ಲಿ ಮಾಡಿದ ಕನ್ನಡ ಕೈಂಕರ್ಯ ಗಮನಾರ್ಹವಾದುದು. 

	ಪ್ರತಿಗಳು ದೊರೆಯದೆ ಸಂಶೋಧಕರಿಗೂ ವಿದ್ಯಾರ್ಥಿಗಳಿಗೂ ಕೈಕಟ್ಟಿದಂಥ ಸ್ಥಿತಿಯಲ್ಲಿ ಕಿಟ್ಟೆಲರ ಕನ್ನಡ ಇಂಗ್ಲಿಷ್ ಅರ್ಥಕೋಶವನ್ನು ವಿಸ್ತರಿಸಿ, ಸಂಪಾದಿಸಿ ಮದ್ರಾಸು ವಿಶ್ವವಿದ್ಯಾಲಯದ ಮೂಲಕ ಪ್ರಕಟಿಸಿದ ಮರಿಯಪ್ಪ ಭಟ್ಟರ ಸಾಧನೆ ಹೆಮ್ಮೆಪಡುವಂಥದು. ಕಿಟ್ಟೆಲರು ಕೋಶ ತಯಾರಿಸುವ ಹೊತ್ತಿಗೆ ಕವಿರಾಜಮಾರ್ಗ, ಪಂಪಭಾರತ, ವಡ್ಡಾರಾಧನೆಯಂಥ ಪ್ರಾಚೀನ ಗ್ರಂಥಗಳು ಬೆಳಕಿಗೆ ಬಂದಿರಲಿಲ್ಲ. ಮರಿಯಪ್ಪ ಭಟ್ಟರು ಸಂಪಾದಿಸಿದ ಕೋಶದಲ್ಲಿ ಆ ಗ್ರಂಥಗಳಲ್ಲಿ ದೊರೆಯುವ ಕಿಟ್ಟೆಲರಿಗೆ ದೊರೆಯದಿದ್ದ ಅನೇಕ ಪದಗಳು ಸೇರ್ಪಡೆಯಾಗಿ ಕೋಶ ನಾಲ್ಕು ಸಂಪುಟಗಳಿಗೆ ವಿಸ್ತರಿಸಿತು. ಇದಕ್ಕಿಂತ ಮೊದಲೇ ಕಿಟ್ಟೆಲ್ ಕೋಶದ ಮಾದರಿಯಲ್ಲಿ ತುಳು-ಇಂಗ್ಲಿಷ್ ಅರ್ಥಕೋಶವನ್ನೂ ಆ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಶಂಕರ ಕೆದಿಲಾಯರನ್ನು ಸಂಪಾದಕರಾಗಿ ತೆಗೆದುಕೊಂಡು ಪ್ರಕಟಿಸಿದ್ದರು. ತಮ್ಮ ಮನೆಮಾತಾದ ಹವ್ಯಕ ಕನ್ನಡದ ಪದಕೋಶವನ್ನು ಸಿದ್ಧಪಡಿಸುವುದರಲ್ಲೂ ಉದ್ಯುಕ್ತರಾಗಿದ್ದರು. ಅದನ್ನು ವ್ಯವಸ್ಥಿತಗೊಳಿಸಿ ಬೇಗನೆ ಪ್ರಕಟಿಸಬೇಕೆಂಬ ಯೋಜನೆ ಅವರದಾಗಿತ್ತು. ಆದರೆ ದುರ್ದೈವದಿಂದ ಅವರು ಬದುಕಿದ್ದಾಗ ಸಾಧ್ಯವಾಗಲಿಲ್ಲ. ಅವರ ಮರಣಾನಂತರ ಅವರ ಮಗಳಾದ ಶಾರದಾ ಜಯಗೋವಿಂದ ಅವರು ಅದನ್ನು ಪರಿಷ್ಕರಿಸಿ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ವತಿಯಿಂದ ಪ್ರಕಟಿಸಿದರು (1980). 

	ಅಲ್ಲದೆ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ (1960). ಸಂತರ ಚರಿತ್ರೆ (1960) ಮತ್ತು ಕನ್ನಡ ಸಂಸ್ಕøತಿ (1967) ಎಂಬ ಮೂರು ಕೃತಿಗಳು ಹಾಗೂ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುಮಾರು 43 ಲೇಖನಗಳನ್ನು ವಿವಿಧ ಸಂಶೋಧನಾ ನಿಯತಕಾಲಿಕ ಮತ್ತು ಇತರ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕನ್ನಡ ಸಂಸ್ಕøತಿ ಎಂಬ ಪುಸ್ತಕದಲ್ಲಿ ಇಂಥ ಆಯ್ದ ಲೇಖನಗಳು (35) ಸಂಕಲಿತವಾಗಿವೆ. ಇದನ್ನು ಬೆಂಗಳೂರಿನ ಸಹಕಾರೀ ಪ್ರಕಾಶನಮಂದಿರದವರು ಪ್ರಕಟಿಸಿದ್ದಾರೆ (1967). 

	ಮಂಗರಾಜನ ಅಭಿನವಾಭಿದಾನಂ (1952). ಸೆಲೆಕ್ಟೆಡ್ ಕನ್ನಡ ಇನ್ಸ್‍ಕ್ರಿಪ್‍ಷನ್ (1952) ಸಂಗೀತ ರತ್ನಾಕರ (1950), ಗುರುಬಸವನ ಸದ್ಗುರು ರಹಸ್ಯ (1951), ರಾಜಾದಿತ್ಯನ ವ್ಯವಹಾರ ಗಣಿತ (1955) -ಇವು ಭಟ್ಟರು ತಾವೇ ಸಂಪಾದಿಸಿದ ಕೃತಿಗಳು, ಆಚಣ್ಣನ ವರ್ಧೆಮಾನ ಪುರಾಣ(1952) ಪಾಶ್ರ್ವಪಂಡಿತನ ಪಾಶ್ರ್ವನಾಥ ಪುರಾಣ (1954), ಶ್ರೀಧರಾಚಾರ್ಯನ ಜಾತಕ ತಿಲಕ (1955), ಚಿಕುಪಾಧ್ಯಾಯನ ಶ್ರೀವಿಷ್ಣುಪುರಾಣಂ(1957)- ಇವು ತಮ್ಮ ಸಹೋದ್ಯೋಗಿಯಾಗಿದ್ದ ಎಂ. ಗೋವಿಂದರಾಯರೊಡನೆ ಸೇರಿ ಸಂಪಾದಿಸಿದ ಕೃತಿಗಳು. ಹಳಗನ್ನಡ ಕಾವ್ಯ ಸಂಗ್ರಹ (1957), ಹೊಸಗನ್ನಡ ಕಾವ್ಯಶ್ರೀ (1957), ನಲ್ನುಡಿ-ನನ್ನುಡಿ (1962), ಸರ್ವಜ್ಞ ವಚನ ಸಂಗ್ರಹ (1971) ಎಂಬವುಗಳಲ್ಲಿ ಮೊದಲನೆಯದನ್ನು ಬಿಟ್ಟು ಉಳಿದವು ಇತರರೊಡನೆ ಸೇರಿ ಸಂಕಲಿತಗೊಳಿಸಿದವು. ದ್ರವಿಡಿಯನ್ ಕಂಪ್ಯಾರಿಟಿವೆ ವಕ್ಯಾಬ್ಯುಲರಿ (1959) ಮದ್ರಾಸ್ ವಿಶ್ವವಿದ್ಯಾಲಯದ ದ್ರಾವಿಡ ಭಾಷಾ ವಿಭಾಗದ ಮುಖ್ಯಸ್ಥರುಗಳೊಡನೆ ಸಹಸಂಪಾದಕತ್ವದಲ್ಲಿ ಪ್ರಕಟಿತವಾಗಿದೆ.
(ಕೆ.ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ